Tuesday, February 7, 2017

ಮೈಮನಸ್ಸಿನ ಆಯಾಸವನ್ನು ಆವಿಯಾಗಿಸುವ ಪ್ರವಾಸ --- ಮನದನ್ನೆಯ ಜನುಮದಿನಕ್ಕೊಂದು ಉಡುಗೊರೆ

ಕನಸುಗಳು ನನಸಾಗಬೇಕಾದರೆ ಕಣ್ಣು ಮಾತ್ರವಲ್ಲ ಹೃದಯ ಕೂಡ ಆ ಕನಸಿಗೆ ಎರಡೆರಡು ಬಾರಿ ಮಿಡಿಯಬೇಕು..   ಮೊದಲು ಬಾಗಿಲು ತೆಗೆದಾಗ ಕನಸುಗಳನ್ನು ಕಂಡರೆ ಎರಡನೇ ಬಾರಿ ಬಾಗಿಲು ತೆರೆದಾಗ ನನಸುಗಳು ಹೊಕ್ಕುತ್ತವೆ..

ತುರ್ತು ಪರಿಸ್ಥಿತಿ  ಕೆಲಸದ ಒತ್ತಡ.. ಹೋಗಲೇಬೇಕಾದ ಅನಿವಾರ್ಯತೆ.. ಬೇರೆ ದಾರಿ ಇರಲಿಲ್ಲ ನನ್ನ  ಸದಸ್ಯನ ಮೈಯನ್ನು ಒಮ್ಮೆ ತಡವರಿಸಿದೆ... "ಶ್ರೀ ನಾನು ಯಾವತ್ತೂ ಸಿದ್ಧ ಎನ್ನುವ ಸಿದ್ಧ ಉತ್ತರ ಬಂದಿತು"

ಮಡದಿ ಮತ್ತು ಮಗಳು ಆಗಲೇ ಸಿದ್ಧವಾಗಿ ಗೇಟ್ ಹತ್ತಿರ ನಿಂತಾಗಿತ್ತು.. ಸ್ವಲ್ಪ ಹೊತ್ತು ಸುಧಾರಿಸಿಕೊಂಡು.. ನನ್ನ ಅಂಬಾರಿ ಏರಿದಾಗ ಸಮಯ ರಾತ್ರಿ  ೧೧.೦೩. ​ಅಂದು ಅಕ್ಟೋಬರ್ ​ ​೨೫ ನೆ ತಾರೀಕು ೨೦೧೩ ನೆ ಇಸವಿ. ​

ಮೊಟ್ಟ ಮೊದಲ ಪ್ರವಾಸ ಕುಟುಂಬದೊಡನೆ​.. ​ ಅದೂ ಸುಮಾರು ೧೦೦೦ ಕಿ. ಮಿ. ಗಳ ಸುದೀರ್ಘ ಪಯಣ.. ಮಗಳು ಮನೆಯಿಂದ ಹೊರಟ ಎರಡೇ ನಿಮಿಷದಲ್ಲಿ ಹಿಂದಿನ ಸೀಟ್ ನಲ್ಲಿ ಹೊದ್ದಿಕೆ ಹೊದ್ದು ನಿದ್ರಾ ದೇವಿಗೆ ಶರಣಾದಳು..ಮಡದಿ ಕಣ್ಣು ಎಳೆಯುತ್ತಿದ್ದರೂ ಪತಿಗೆ ಜೊತೆ ನೀಡಲು ಹಾಗೂ ಹೀಗೂ ಮಾತಾಡುತ್ತಾ ಕೂತಿದ್ದಳು.. ಮೊದಲ ನೂರು ಕಿ.ಮಿ. ಸಾಗಿದ ಮೇಲೆ ಮಧ್ಯ ರಾತ್ರಿ ಸುಮಾರು ಒಂದೂವರೆ ಘಂಟೆ ನಿದ್ರಾದೇವಿ ಬಾಗಿಲು ತಟ್ಟುತ್ತಿದ್ದಳು.. ಸೊಗಸಾದ ರಸ್ತೆ.. ಬಿಡಲು ಮನಸ್ಸಿಲ್ಲ ಆದರೆ ನಿದ್ರಾದೇವಿ ಬಿಡಲಿಲ್ಲ.. ರಸ್ತೆ ಬದಿಗೆ ಕಾರನ್ನು ನಿಲ್ಲಿಸಿ ಹತ್ತು ನಿಮಿಷ ನಿದ್ರಾದೇವಿಯ ಜೊತೆಯಲ್ಲಿ ಸಲ್ಲಾಪ... ಮತ್ತೆ ಮುಂದುವರೆಯಿತು.. ೭೦ ಕಿಮಿ ಆಗಿರಬಹುದು..ನಾ ಬಂದೆ... ನಾ  ನೋಡ್ದೆ.. ನಾ ಗೆದ್ದೇ  ಅಂದಳು ನಿದ್ರಾಮಾತೆ.. ಸರಿ ಮತ್ತೆ ಒಂದು ಇಪ್ಪತ್ತು ನಿಮಿಷ.. ಹ ಹ
ಚುಮು ಚುಮು ಚಳಿಯಲ್ಲಿಯೂ ನನ್ನ ಜೊತೆ ಸಾಥ್ ಕೊಟ್ಟ ಗೆಳೆಯ 
ಬೆಳಗಿನ ಜಾವ ಐದು ಘಂಟೆ ಸಮಯ.. ಸಕ್ಕರೆ ನಿದ್ದೆಯ ಸಮಯ..ಕಾರಿನ ಡೆಕ್ ನಲ್ಲಿ  ನಿದ್ರಾದೇವಿ ಹಾಡಿದ  "ಎಂದೆದಿಗೂ ನಾ ನಿನ್ನ​... ​ ಬಿಡಲಾರೆ ಬಾ ಚೆನ್ನ" ತೇಲಿ ಬರುತ್ತಿತ್ತು . ಒಂದು ಘಂಟೆ ಸುಧೀರ್ಘ ನಿದ್ದೆ.. "

"ತೇರಾ ಏರಿ ಅಂಬರದಾಗೆ ನೇಸರ ನಗುತಾನೆ..." ಹಾಡು ಮನಸ್ಸನ್ನು ಒಮ್ಮೆಲೇ ಎಚ್ಚರಿಸಿತು.. ಓಹ್ ಬೆಳಗಾಯಿತು.. ಬೀದಿ ಬದಿಯ  ಅಂಗಡಿಯಲ್ಲಿ ಚಹಾ ಕುಡಿದು.. ಮುಖವನ್ನು ಆಗಸದೆಡೆ ಮಾಡಿ. ರವಿ ಮಾಮನಿಗೆ ನಮಿಸಿ ಹೊರಟೆ.. ಅಲ್ಲಿಂದ ಶುರುವಾಯಿತು.. ಒಂದು ಸುಮಧುರ ಯಾನ..

ರಾತ್ರಿ ೧೧ಕ್ಕೆ ಹೊರಟು ಬೆಳಿಗ್ಗೆ ೬ ಆಗಿದ್ದರು ಸವೆದದ್ದು ಬರಿ ೨೦೦ ಕಿ ಮೀ ಮಾತ್ರ.. ಚಿತ್ರದುರ್ಗ ತಲುಪಿದ್ದೆವು ಅಷ್ಟೇ.. ಅನಂತರ ಪಯಣಕ್ಕೆ ಜೋಶ್ ಬಂತು.. ಅಲ್ಲಿಂದ ಉಳಿದ ೩೦೦ ಕಿಮಿ ಮುಂದಿನ ಮೂರು ಘಂಟೆಯಲ್ಲಿ ತಲುಪಿದೆವು..
ಹೆಬ್ಬಾವು ಹೊಟ್ಟೆ ತುಂಬಾ ತಿಂದು ಸುಸ್ತಾಗಿ ಮಲಗಿದಂತೆ ಕಾಣುವ ಸುಧೀರ್ಘ ರಸ್ತೆ.. ತಿರುವಿಲ್ಲ... ಎದುರು ವಾಹನ ಬರುತ್ತದೆ ಅನ್ನುವ ಭಯವಿಲ್ಲ..

ಆ ರಸ್ತೆಯಲ್ಲಿ ವಾಹನ ಚಾಲನೆ ಒಂದು ಅದ್ಭುತ ಅನುಭವ.. ಸುತ್ತಮುತ್ತಲೂ ಹಸಿರು.. ತಂಪಾದ ಗಾಳಿ. ಮನಸ್ಸಿಗೆ ಮುದ ನೀಡುತ್ತಿತ್ತು.. ತಿಂಡಿಗೆ ಅಂತ ಒಂದು ಕಡೆ ನಿಲ್ಲಿಸಿ.. ವಿಶ್ರಾಂತಿ ತೆಗೆದುಕೊಂಡು ಮತ್ತೆ ಪಯಣ ಶುರು.
ವಿಧಾನಸೌಧ ಬೆಳಗಾವಿಯಲ್ಲಿ !!!

ಬೆಳಗಾವಿ ತಲುಪಿದಾಗ ಸುಮಾರು ಒಂಭತ್ತು ಮೂವತ್ತು. ನಿಗದಿ ಪಡಿಸಿದ ಹೋಟೆಲ್ ನಲ್ಲಿ ಪ್ರಾತಃ ಕರ್ಮಾದಿಗಳನ್ನೆಲ್ಲ ಮುಗಿಸಿ.. ಕಾರ್ಯ ನಿಮಿತ್ತ ಬಂದಿದ್ದ ಕಡತಗಳನ್ನೆಲ್ಲ ಅದರ ಸ್ವಸ್ಥಾನಕ್ಕೆ ​ಇಟ್ಟು ಕೆಲಸವನ್ನೆಲ್ಲಾ ಮುಗಿಸಿದಾಗ
ಮಧ್ಯಾಹ್ನವಾಗಿತ್ತು.. ವಿಪರೀತ ತಲೆಶೂಲೆ ಮಧ್ಯಾಹ್ನವನ್ನು ನುಂಗಿ ಹಾಕಿತ್ತು..

ಸಂಜೆ ಹಾಗೆ ಬೆಳಗಾವಿ ರಸ್ತೆಯಲ್ಲಿ ಅಡ್ಡಾಡುತ್ತಾ ಮತ್ತೆ ನನ್ನ ಲೆಕ್ಕ ಪತ್ರ ಅಧಿಕಾರಿಯನ್ನು ಭೇಟಿ ಮಾಡಿ ಅಂದಿನ ಕೆಲಸದ ಒಂದು ಟಿಪ್ಪಣಿ ಮಾಡಿಕೊಂಡು ಅವರ ಜೊತೆಯಲ್ಲಿಯೇ ರಾತ್ರಿ ಊಟಕ್ಕೆ ಹೋದೆವು..

ಮೊದಲ ದಿನ ನಾ ಬಂದ ಕೆಲಸ ಮುಗಿದ್ದದ್ದರಿಂದ.. ಹಾಗೆಯೇ ಮಾರನೆ ದಿನ ಬೆಂಗಳೂರಿಗೆ ಹಿಂದಿರುಗುವ ಮುನ್ನ ನೋಡಬೇಕಾದ ತಾಣಗಳ ಪಟ್ಟಿ ಸಿದ್ಧವಾಗಿದ್ದರಿಂದ..  ಮತ್ತು ಹಿಂದಿನ ದಿನದ ಸುದೀರ್ಘ ವಾಹನ ಚಾಲನೆಯಿಂದ ಸುಸ್ತಾಗಿದ್ದ ದೇಹಕ್ಕೆ ನಿದ್ರೆ ತಾನಾಗೆ ಬರುವ ಮಳೆಯಂತೆ ತಂಪೆರೆಯಿತು..
ನೂರಾರು ಮನಸ್ಸನ್ನು ಬೆಸೆಯುವ ಸೇತುವೆ!!!
ಅಪ್ಪಾ ಗೋಕಾಕ್ ಫಾಲ್ಸ್ ನೋಡೋಣ ಅಂತ ಮಗಳು ಯಾವಾಗಲೂ ಹೇಳುತ್ತಿದ್ದಳು.. ಸರಿ ಅಲ್ಲಿಗೆ ಹೋಗುವುದು ಮೊದಲೇ ನಿರ್ಧಾರವಾಗಿತ್ತಲ್ಲ..!

ಕರುನಾಡಿನ ನಯಾಗರ ಎಂದೇ ಹೆಸರಾಗಿದ್ದ ಜಲಪಾತ ಮಾನವನ ಮಹತ್ವಾಕಾಂಕ್ಷೆ ​ ಅವನ ಅಭಿವೃದ್ಧಿಯ ಮಂತ್ರದ ಪದಗಳಿಗೆ ಸೊರಗಿ ನಾಚಿ ಬಾಡಿ ಹೋಗಿತ್ತು.. ಅಲ್ಲಿ ಕಾಣುತ್ತಿದ್ದ ಬೆತ್ತಲೆ ಕಲ್ಲು ಬಂಡೆಗಳು ಮಾನವನ (ಅತಿ)ಆಸೆಗಳ ಫಲ ನಾವಿಲ್ಲಿ ಅನುಭವಿಸುತ್ತಿದ್ದೇವೆ ಎನ್ನುವಂತೆ ಇತ್ತು..
ಅದರ ಇನ್ನೊಂದು ಮುಖ!!!
ಇಷ್ಟೆಲ್ಲಾ ಆದರು ಪ್ರಕೃತಿ ಮಾತೆ ತನ್ನ ಚೆಲುವನ್ನು ಅಷ್ಟು ಸುಲಭವಾಗಿ ಬಚ್ಚಿಡುವಳು ಅಲ್ಲ ಅಲ್ಲವೇ.. ಆ ನಿಸರ್ಗ ಮಾತೆಯ ನಿರ್ದೇಶನದಲ್ಲಿ ಅವಳ ಶಿಲ್ಪಿ ಸುಂದರವಾಗಿ ಕೊರೆದು ನಿಲ್ಲಿಸಿದ್ದ ಅನೇಕ ಬಂಡೆಗಳು ಸುಂದರವಾಗಿ ಕಾಣುತ್ತಿದ್ದವು.. ಆ ಜಲಪಾತದ ಮೇಲೆಯೇ ನೂರಕ್ಕೂ ಹೆಚ್ಚು ವರ್ಷಗಳಿಂದ ನಿಂತಿರುವ ಸುಮಾರು ೬೫೯ ಅಡಿ ಉದ್ದದ ತೂಗು ಸೇತುವೆ.. ಅದರ ಮಧ್ಯೆ ಹೋದಾಗ ಅದು ಬಳುಕುವ ಚೆಲುವು.. ಹಾಗೆಯೇ ಬಳುಕುವಾಗ ನಡುಗುವ ನಮ್ಮ ಎದೆಯು.. ಆಹಾ ಅದರ ಅನುಭವವೇ ಅನುಭವ..
ಕರುನಾಡ ನಯಾಗರ.. ನೀರಿದ್ದಾಗ.. 
ಘಟಪ್ರಭಾ ನದಿಯ ಒಂದು ತಿರುವು ಮತ್ತು ಅದರ ಮಧ್ಯದಲ್ಲಿ ಬರುವ ಸುಮಾರು ೧೭೦ ಅಡಿ ​ಆಳದ ಕಣಿವೆಯಲ್ಲಿ ಧುಮುಕುವ ಹಾಲಿನ ನೊರೆ ನಯಾಗರ ಜಲಪಾತದ ಅವಳಿ ಎನ್ನುವಂತೆ ಕಾಣುತ್ತದೆ.. ಹೆಚ್ಚು ಕಡಿಮೆ ಕುದುರೆ ಲಾಳದ ಆಕೃತಿಯ ಈ ಜಲಪಾತ ಮಳೆಗಾಲದಲ್ಲಿ ಮೈದುಂಬಿ ಹರಿಯವ ಕನ್ಯಾಕುಮಾರಿಯೇ ಹೌದು.. ನಿಜಕ್ಕೂ ಆ ಸಮಯದಲ್ಲಿ ಕೆಳಗೆ ಬಂಡೆಗಳ ಮಧ್ಯದಲ್ಲಿ ರಭಸದಿಂದ ಹರಿಯುವ ಘಟಪ್ರಭೆ.. ನಂತರ ಕಮರಿಗೆ ಬೀಳುವಾಗ ಎದೆ ನಡುಗಿಸುವ ಸದ್ದು.. ತೂಗುತ್ತಾ ಎದೆ ನಡುಕವನ್ನು ಹೆಚ್ಚಿಸುವ ತೂಗು ಉಯ್ಯಾಲೆ... ಒಮ್ಮೆ ಅನುಭವಿಸಬೇಕು..

ಆದರೆ ನಾವು ಹೋದಾಗ ಬತ್ತಿದ ಬಾಳೆಕಾಯಿ​ಯ ಹಾಗೆ ಆಗಿ ಹೋಗಿತ್ತು ಆ ಸುಂದರ ಜಲಪಾತ.. ಈ ಜಲಪಾತಕ್ಕೆ ನನ್ನದು ಎರಡನೇ ಭೇಟಿ ಆದರೂ ಮೊದಲಿಗೆ ನೋಡುತ್ತಿದ್ದೇನೆ ಎನ್ನುವಂತೆ ಹೊಸ ಲೋಕವನ್ನು ಪ್ರಕೃತಿ ಮಾತೆ ತೆರೆದಿಟ್ಟಿದ್ದಳು..

ಜಲಪಾತದ ವಿಹಂಗಮ ನೋಟ ನೋಡಲು ಸೇತುವೆಯನ್ನು ದಾಟಿ ಸುಮಾರು ಒಂದು ೨೦೦
ಮೀಟ​​ರುಗಳ​ಷ್ಟು  ನಡೆದರೆ ಅಲ್ಲಿ ಚಾಲುಕ್ಯರ ಕಾಲದ ಕೆಲ ದೇವಾಲಯಗಳು ಗೋಚರಿಸುತ್ತವೆ.. ಕೆತ್ತನೆ, ಕುಸುರಿ ಗಮನ ಸೆಳೆಯದಿದ್ದರೂ ಆ ಕಾಲದ ದೇವಾಲಯಗಳನ್ನು ನೋಡುತ್ತಾ..ಕಾಲಘಟ್ಟದಲ್ಲಿ ಅನೇಕ ಘಟನೆಗಳನ್ನು ಮಡಿಲಲ್ಲಿ ಹುದುಗಿಸಿಕೊಂಡಿರುವ ಆ ಪುಣ್ಯ ಭೂಮಿಯ ಜೊತೆಯ ಕೆಲ ಸಮಯದ ಒಡನಾಟ ನಿಜವಾಗಿಯೂ ಮನಸ್ಸಿಗೆ ಹಾಯ್ ಎನ್ನಿಸುತ್ತದೆ..

ಪುರಾತನ ಗೋಕಾಕ್ ಮಿಲ್ಸ್ 
ಈ ದೇವಾಲಯದ ಹಿಂಭಾಗದಲ್ಲಿ ಬಂದು ನಿಂತರೆ ರುದ್ರ ರಮಣೀಯ ಗೋಕಾಕ್ ಜಲಪಾತದ ಸಂಪೂರ್ಣ ದರ್ಶನ ಸಿಗುತ್ತದೆ.. ಅದರ ಜೊತೆಯಲ್ಲಿಯೇ ಆ ಕಣಿವೆ, ಸುಮಾರು ೧೮೮೭ ರಲ್ಲಿ ಸ್ಥಾಪಿತಗೊಂಡ ವಿದ್ಯುತ್ ಉತ್ಪಾದನ ಕೇಂದ್ರ.. ಎಲ್ಲವೂ ಕಾಣಸಿಗುತ್ತದೆ.. ಹಾಗೆಯೇ ಇನ್ನು ಕಾರ್ಯ ನಿರತವಾಗಿರುವ ಗೋಕಾಕ್ ಮಿಲ್ಸ್ ಕಟ್ಟಡ ಮನಸ್ಸೆಳೆಯುತ್ತದೆ..

ಜಲಪಾತದ ದಂಡೆಯಲ್ಲಿರುವ ಶಿವನ ದೇವಸ್ಥಾನ ಗಮನ ಸೆಳೆಯುತ್ತದೆ.. ಜೊತೆಯಲ್ಲಿಯೇ ದೇವಾಲಯದ ಕಟ್ಟಡ ಸೊಬಗು ಒಂದು ಕ್ಷಣ ನಮ್ಮನ್ನು ಗತಕಾಲಕ್ಕೆ ಕೊಂಡೊಯ್ಯುತ್ತದೆ..

ಅಲ್ಲಿಂದ ಹೊರಟ ಮೇಲೆ ನಮ್ಮ ಮುಂದಿನ ಪಯಣ ಇದ್ದದ್ದು ಬೆಂಗಳೂರು ಮಾತ್ರ.. ಅಲ್ಲಿಂದ ಯರಗಟ್ಟಿ ಮಾರ್ಗವಾಗಿ ಸವದತ್ತಿ ಹುಬ್ಬಳ್ಳಿ ಮಾರ್ಗವಾಗಿ ಬೆಂಗಳೂರು ಸೇರುವ ನಮ್ಮ ಪಯಣಕ್ಕೆ ಮತ್ತೆ ತಡೆಯೊಡ್ಡಿದ್ದು ಒಂದು ಅನಾಮಧೇಯ ಜಲಪಾತ..
ಎಲ್ಲೆಡೆ ಹಸಿರು 
ಸಾಮಾನ್ಯ ಸಾಹಸಗಳಿಗೆ ತಲೆ ಹಾಕದ ನನ್ನ ಮಡದಿ ಅಷ್ಟು ನೀರಿಲ್ಲದ ಜಲಪಾತವನ್ನು ನೋಡಿ ಖುಷಿಯಾಗಿ ಸುಮಾರು ಎತ್ತರಕ್ಕೆ ಹತ್ತಿಯೇ ಬಿಟ್ಟಳು.. ನನಗೂ ನನ್ನ ಮಗಳಿಗೂ ಆಶ್ಚರ್ಯ.. ಇಬ್ಬರು ಅವಳನ್ನು ​ಮು​ಟ್ಟಿ ನೋಡಿದೆವು ಜ್ವರ ಏನು ಇರಲಿಲ್ಲ :-) ಆರಾಮಾಗಿಯೇ ಇದ್ದಳು..


ಮೇಲೆ ಹತ್ತಿ ಜಲಪಾತದ ಇನ್ನೊಂದು ಮುಖವನ್ನು ಕಂಡು ಪುಳಕಿತಗೊಂಡೆ. ಗೋಕಾಕ್ ಜಲಪಾತ ತನ್ನ ಮಡಿಲಲ್ಲಿ ಹೆಚ್ಚು ನೀರನ್ನು ಇಟ್ಟುಕೊಳ್ಳದೆ ಬೇಸರಮೂಡಿಸಿದ್ದರೂ.. ಈ ಅನಾಮಧೇಯ ಹಾಗೂ ಅಚ್ಚರಿ ಮೂಡಿಸಿದ ಜಲಪಾತ ಒಂದು ರೀತಿಯ ತಂಪನ್ನು ಎರೆಯಿತು.. ಕೆಲಕಾಲ ಅದರ ಮಡಿಲಲ್ಲಿ ಆಡುತ್ತಾ, ಅನೇಕ ಚಿತ್ರಗಳನ್ನು ಕ್ಯಾಮೆರಾದ ಹೊಟ್ಟೆಯೊಳಗೆ ತುಂಬಿಸಿಕೊಂಡು ಹೊರಟೆವು ಬೆಂಗಳೂರಿನ ಕಡೆಗೆ...

ಹರಿಹರ ತಲುಪಿದಾಗ.. ಸಂಜೆಯಾಗಿತ್ತು.. ಆ ದೇವಾಲಯವನ್ನು ನೋಡಿರಲಿಲ್ಲ.. ಕಾರು ನಿಲ್ಲಿಸಿದ್ದೆ ದೇವಸ್ಥಾನದೊಳಗೆ ಹೆಜ್ಜೆ ಹಾಕಿದ್ದೆ. ಹರಿಹರೇಶ್ವರನಿಗೆ ನಮ್ಮ ಅರ್ಜಿ ಸಲ್ಲಿಸಿ... ಮತ್ತೆ ಬರುವುದಾಗಿ ಹೇಳಿ ಹೊರಟೆವು.
ಹರಿಹರೇಶ್ವರ
ಈ ದೇವಸ್ಥಾನದ ಬಗ್ಗೆ ಕಿರುಮಾತು.. ಈ ದೇವಾಲಯವನ್ನು ನೋಡಬೇಕೆಂಬ ಬಯಕೆ ತುಂಬಾ ವರ್ಷಗಳದಾಗಿತ್ತು.. ಹೆಜ್ಜೆ ಇಟ್ಟಾಗ ಏನೋ ಒಂದು ರೀತಿಯ ಸಂತೋಷ.. ಊರ ಹೊರಗಿದ್ದ ದೇವಾಸ್ಥಾನ.. ನಾಗರೀಕತೆ ಬೆಳೆದು.. ಹಳ್ಳಿ ಪಟ್ಟಣವಾಗಿ.. ಇಂದು ದೇವಸ್ಥಾನ ಅಂಗಣದ ಒಳಗೆ ಅನೇಕ ಸಂಸಾರಗಳು ಬೀಡು ಬಿಟ್ಟು.. ಇದು ಒಂದು ರೀತಿಯ ಮನೆ ದೇವಾಲಯವಾಗಿದೆ.. ಹೊಯ್ಸಳ ಶಿಲ್ಪಕಲೆ ಸುಂದರವಾಗಿದೆ.. ಸಮಯದ ಅಭಾವ.. ಹೆಚ್ಚು ಹೊತ್ತು ನಿಲ್ಲಲು ಆಗಲಿಲ್ಲ..

ದಿನಕರ ಆಗಲೇ ತನ್ನ ಕೆಲಸ ಮುಗಿಸಿ ಹೊರಟಿದ್ದ.. ಕತ್ತಲೆಯಲ್ಲಿ ಡ್ರೈವಿಂಗ್.. ಇಷ್ಟವಾಗಿತ್ತು... ಶಿರಾ ಹತ್ತಿರ ಒಂದು ಕಾಫಿ.. ಮತ್ತೆ ದಾಬಸ್ ಪೇಟೆ ಹತ್ತಿರ ಒಂದು ಕಾಫಿ.. ನಂತರ ಸೀದಾ ಮನೆ..

ಒಂದು ಅದ್ಭುತ ಪ್ರವಾಸ ಮಾಡಿದ ಖುಷಿ ನನ್ನದಾದರೆ, ಇಂದಿಗೂ ಮಗಳು ಹೇಳುತ್ತಾಳೆ..ಅಪ್ಪ ಬೆಳಗಾವಿಗೆ ಹೋಗಿದ್ದೆವಲ್ಲಾ ಆ ತರಹ ಇನ್ನೊಮ್ಮೆ ಬೇರೆ ಕಡೆ ಹೋಗೋಣ.. :-)

ನನ್ನ ಮಡದಿ ನನ್ನ ಜೊತೆ ಪ್ರವಾಸಕ್ಕೆ ಇಂದಿಗೂ ಸಿದ್ಧ.. ಇಡೀ ಪ್ರವಾಸ ದೇಹಕ್ಕೆ ಮನಸ್ಸಿಗೆ ಮುದ ನೀಡಿತ್ತು... ಸಾಮಾನ್ಯ ಪ್ರವಾಸಿ ಲೇಖನವನ್ನು ತಕ್ಷಣಕ್ಕೆ ಬರೆಯುವ ನಾನು.. ಕಾರಣದ ಅರಿವಿಲ್ಲದೆ ಮೂರು ವರ್ಷದ ನಂತರ ಬರೆಯುತ್ತಿದ್ದೇನೆ.. ಆದರೆ ಕಾರಣ ಕಾರಣ ಕಾರಣ ನೂರಾರು ಇರಬಹುದು.. ಆದರೆ ಈ ತಡವೂ ಒಂದು ರೀತಿಯಲ್ಲಿ ವರವಾಗಿದೆ..

ನನ್ನಾಕೆ ನನ್ನ ಜೀವನದಲ್ಲಿ ಹೆಜ್ಜೆ ಇಟ್ಟು ಬಂದು ಹದಿನೈದು ವರ್ಷಗಳಾದವು.. ಇಂದು ಅವಳ ಜನುಮದಿನ.. ಅವಳು ಇಂದಿಗೂ ಇಷ್ಟಪಡುವ ಬೆಳಗಾವಿ ಪ್ರವಾಸದ ಬಗ್ಗೆ ಬರೆಯುದಕ್ಕಿಂತ ಇನ್ನೊಂದು ಉಡುಗೊರೆ ಇರಲಾರದು ಅಲ್ಲವೇ.. !!


ಹಾಗಾಗಿ ಈ ಲೇಖನ ಸವಿತಾ ಜನುಮದಿನಕ್ಕೆ ಅರ್ಪಿತಾ.. ಹ್ಯಾಪಿ ಬರ್ತ್ಡೇ ಟೀಈಈ!!!